Creative & Modern Classroom Ideas

ಈ ಉಪಕ್ರಮದ 7ನೇ ಆವೃತ್ತಿಯಲ್ಲಿ 195 ಸರ್ಕಾರಿ ಶಾಲೆಗಳ 7,620 ವಿದ್ಯಾರ್ಥಿಗಳಿಗೆ 42,819 ನೋಟ್‌ಬುಕ್‌ಗಳನ್ನು ವಿತರಿಸಲಾಗಿದ್ದು, ಹಿಂದುಳಿದ ಸಮುದಾಯಗಳ ಶಿಕ್ಷಣ ಅಭಿವೃದ್ಧಿಗೆ SRI-B ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ.
ಬೆಂಗಳೂರು, ಕರ್ನಾಟಕ, ಜುಲೈ 06, 2026: ಕೊರಿಯಾದ ಹೊರಗಿರುವ ಸ್ಯಾಮ್ಸಂಗ್‌ನ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ (R&D) ಕೇಂದ್ರವಾಗಿರುವ ಹಾಗೂ ಭಾರತದ ಪ್ರಮುಖ ನವೋದ್ಯಮ ಕೇಂದ್ರಗಳಲ್ಲಿ ಒಂದಾದ Samsung R&D Institute Bangalore (SRI-B) ತನ್ನ ಶಿಕ್ಷಣ ಸೇವಾ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಈ ವರ್ಷ 195 ಸರ್ಕಾರಿ ಶಾಲೆಗಳ 7,620 ವಿದ್ಯಾರ್ಥಿಗಳಿಗೆ 42,819 ನೋಟ್‌ಬುಕ್‌ಗಳನ್ನು ವಿತರಿಸುವ ಮೂಲಕ, 2015ರಲ್ಲಿ ಈ ಕಾರ್ಯಕ್ರಮ ಆರಂಭವಾದ ಬಳಿಕ ಇದುವರೆಗೆ ಕರ್ನಾಟಕದಾದ್ಯಂತ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸುಮಾರು 15 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸಿದೆ.
ಈ ಕಾರ್ಯಕ್ರಮದಲ್ಲಿ SRI-Bಯ 120ಕ್ಕೂ ಹೆಚ್ಚು ಸಿಬ್ಬಂದಿ ಸ್ವಯಂಸೇವಕರಾಗಿ ಭಾಗವಹಿಸಿ, ಕೋಲಾರ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನೋಟ್‌ಬುಕ್‌ಗಳನ್ನು ವಿತರಿಸಿದರು. ಇದು ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಸಂಸ್ಥೆಯ ಸಂಸ್ಕೃತಿಯನ್ನೂ ಹಾಗೂ ಸುತ್ತಮುತ್ತಲಿನ ಸಮುದಾಯಗಳ ಮೇಲೆ ಶಾಶ್ವತ ಪರಿಣಾಮ ಬೀರುವ ಬದ್ಧತೆಯನ್ನೂ ಪ್ರತಿಬಿಂಬಿಸುತ್ತದೆ.
ಭಾರತದಲ್ಲಿ ಅತಿ ಹೆಚ್ಚು ಪೇಟೆಂಟ್‌ಗಳನ್ನು ದಾಖಲಿಸುವ ಸಂಸ್ಥೆಗಳಲ್ಲಿ ಒಂದಾದ SRI-B, "ಶಿಕ್ಷಣದಿಂದಲೇ ನವೋದ್ಯಮ ಆರಂಭವಾಗುತ್ತದೆ" ಎಂಬ ನಂಬಿಕೆಯನ್ನು ಹೊಂದಿದೆ. ತನ್ನ ದೀರ್ಘಕಾಲದ ನೋಟ್‌ಬುಕ್ ದಾನ ನೀಡುವ ಕಾರ್ಯಕ್ರಮದ ಮೂಲಕ, ಮೂಲಭೂತ ಕಲಿಕಾ ಸಂಪನ್ಮೂಲಗಳ ಲಭ್ಯತೆಯಲ್ಲಿರುವ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಲು ನೆರವಾಗುತ್ತಿದೆ.
ಈ ನೋಟ್‌ಬುಕ್ ದಾನ ಕಾರ್ಯಕ್ರಮದ ಕಲ್ಪನೆ 2015ರಲ್ಲಿ ಮೂಡಿಬಂದಿತು. ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಸ್ಯಾಮ್ಸಂಗ್ ಉದ್ಯೋಗಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದಾಗ, ಅನೇಕ ವಿದ್ಯಾರ್ಥಿಗಳು ಶಾಲೆಗೆ ನಿಯಮಿತವಾಗಿ ಹಾಜರಾಗುತ್ತಿದ್ದರೂ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿಗಳಂತಹ ಮೂಲಭೂತ ಶೈಕ್ಷಣಿಕ ಸಾಮಗ್ರಿಗಳ ಕೊರತೆಯನ್ನು ಎದುರಿಸುತ್ತಿರುವುದು ತಿಳಿದುಬಂತು. ಈ ಸಮಸ್ಯೆಯನ್ನು ಅರಿತ SRI-B ಉದ್ಯೋಗಿಗಳು ಒಟ್ಟಾಗಿ ಶಿಕ್ಷಣಕ್ಕೆ ಬೆಂಬಲ ನೀಡುವ ಹಾಗೂ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಮುಂದುವರಿಯಲು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಿದರು.
ಈಗ ತನ್ನ ಏಳನೇ ಆವೃತ್ತಿಯನ್ನು ತಲುಪಿರುವ ಈ ಕಾರ್ಯಕ್ರಮವನ್ನು 2015, 2016, 2017, 2018, 2019, 2025 ಹಾಗೂ 2026ರಲ್ಲಿ ನಡೆಸಲಾಗಿದೆ. ಸರ್ಕಾರಿ ಶಾಲೆಗಳು ಪಠ್ಯಪುಸ್ತಕಗಳನ್ನು ಒದಗಿಸುತ್ತಿದ್ದರೂ, ನೋಟ್‌ಬುಕ್‌ಗಳ ಲಭ್ಯತೆ ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಸವಾಲಾಗಿಯೇ ಉಳಿದಿದೆ. ಮೂಲಭೂತ ಕಲಿಕಾ ಸಂಪನ್ಮೂಲಗಳ ಕೊರತೆಯಿಂದ ಯಾವುದೇ ಮಗು ಶಿಕ್ಷಣದಿಂದ ಹಿಂದೆ ಉಳಿಯಬಾರದು ಎಂಬ ಉದ್ದೇಶದಿಂದ SRI-B 2025ರಲ್ಲಿ ಈ ಕಾರ್ಯಕ್ರಮವನ್ನು ಮರುಪ್ರಾರಂಭಿಸಿ, ಈ ವರ್ಷವೂ ಮುಂದುವರಿಸಿದೆ.
SRI-B ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಪೊರೇಟ್ ಉಪಾಧ್ಯಕ್ಷರಾದ ಮೋಹನ್ ರಾವ್ ಗೋಲಿ ಅವರು ಹೀಗೆ ಹೇಳಿದರು:
"SRI-Bಯಲ್ಲಿ ನವೋದ್ಯಮ ಮತ್ತು ಶಿಕ್ಷಣ ಒಂದಕ್ಕೊಂದು ಪೂರಕವಾಗಿವೆ. ಎಂಜಿನಿಯರ್‌ಗಳು ಮತ್ತು ನವೋದ್ಯಮಿಗಳಾಗಿ ನಾವು ಶಿಕ್ಷಣದ ಪರಿವರ್ತನಾ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದೇವೆ. ಒಂದು ನೋಟ್‌ಬುಕ್ ಸಾಮಾನ್ಯ ವಸ್ತುವಿನಂತೆ ಕಾಣಬಹುದು. ಆದರೆ ಒಂದು ಮಗುವಿಗೆ ಅದು ಅವಕಾಶ, ಆತ್ಮವಿಶ್ವಾಸ ಮತ್ತು ಕನಸು ಕಾಣುವ ಸ್ವಾತಂತ್ರ್ಯದ ಸಂಕೇತವಾಗಿದೆ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮದೇ ಯಶೋಗಾಥೆಯನ್ನು ಬರೆಯಲು ಅಗತ್ಯವಾದ ಸಂಪನ್ಮೂಲಗಳನ್ನು ಪಡೆದು ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ."
SRI-Bಯ CSR ವಿಭಾಗದ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ಅಮಿತ್ ಮನ್ನನ್ ಅವರು ಹೇಳಿದರು:
"ಸಮುದಾಯಗಳ ಸಬಲೀಕರಣವು ಯುವ ಮನಸ್ಸುಗಳ ಸಬಲೀಕರಣದಿಂದಲೇ ಆರಂಭವಾಗುತ್ತದೆ ಎಂಬ ನಂಬಿಕೆಯೇ ನಮ್ಮ ದೃಷ್ಟಿಕೋನದ ಮೂಲವಾಗಿದೆ. ಮೂಲಭೂತ ಶೈಕ್ಷಣಿಕ ಸಂಪನ್ಮೂಲಗಳಿಗೆ ಪ್ರವೇಶ ಕಲ್ಪಿಸುವುದು ಅವಕಾಶಗಳ ಬಾಗಿಲು ತೆರೆಯುವ ಮೊದಲ ಹೆಜ್ಜೆಯಾಗಿದೆ. ನಮ್ಮ ನೋಟ್‌ಬುಕ್ ದಾನ ಕಾರ್ಯಕ್ರಮದಂತಹ ಉಪಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಯಲು, ಬೆಳೆಯಲು ಮತ್ತು ಯಶಸ್ವಿಯಾಗಲು ಅಗತ್ಯವಾದ ಸಾಧನಗಳನ್ನು ಒದಗಿಸುವ ಮೂಲಕ ಈ ಅಂತರವನ್ನು ಕಡಿಮೆ ಮಾಡಲು ನಾವು ಶ್ರಮಿಸುತ್ತಿದ್ದೇವೆ. ನಮ್ಮ ಸಿಬ್ಬಂದಿ ಸ್ವಯಂಸೇವಕರ ಉತ್ಸಾಹದೊಂದಿಗೆ, ಸ್ಮಾರ್ಟ್ ಶಿಕ್ಷಣವನ್ನು ಉತ್ತೇಜಿಸುವುದು, ಯುವಜನರನ್ನು ಸಬಲಗೊಳಿಸುವುದು ಹಾಗೂ ಇನ್ನಷ್ಟು ಬಲಿಷ್ಠ ಮತ್ತು ಸಮಗ್ರ ಹೊಸ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡುವ ನಮ್ಮ ಬದ್ಧತೆ ಮುಂದುವರಿಯಲಿದೆ."
ಕೆಜಿಎಫ್ ತಾಲ್ಲೂಕಿನ ಬಡಮಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವೆಂಕಟೇಶ ಎಂ. ಅವರು ಹೀಗೆ ಹೇಳಿದರು:
"ನಮ್ಮ ಅನೇಕ ವಿದ್ಯಾರ್ಥಿಗಳು ಇಡೀ ಶೈಕ್ಷಣಿಕ ವರ್ಷದ ನೋಟು ಪುಸ್ತಕಗಳನ್ನು ಖರೀದಿಸುವುದೇ ಸವಾಲಾಗಿರುವ ಕುಟುಂಬಗಳಿಂದ ಬರುತ್ತಾರೆ. ಎಸ್‌ಆರ್‌ಐ-ಬಿಯ ಈ ಸಹಾಯದಿಂದ ಅವರು ಆತ್ಮವಿಶ್ವಾಸದಿಂದ ಕಲಿಯಲು ಅಗತ್ಯವಾದ ಸಂಪನ್ಮೂಲಗಳನ್ನು ಪಡೆಯುತ್ತಿದ್ದಾರೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿರುವ ಸ್ವಯಂಸೇವಕರಿಗೆ ನಾವು ಕೃತಜ್ಞರಾಗಿದ್ದೇವೆ."
ಕಾಲಕ್ರಮೇಣ, ಸರ್ಕಾರಿ ಶಾಲೆಗಳಿಗೆ ಎಸ್‌ಆರ್‌ಐ-ಬಿಯ ಕೊಡುಗೆ ಕೇವಲ ನೋಟು ಪುಸ್ತಕಗಳ ವಿತರಣೆಗೆ ಮಾತ್ರ ಸೀಮಿತವಾಗಿಲ್ಲ. ಸಂಸ್ಥೆಯು ಕರ್ನಾಟಕದಾದ್ಯಂತ ಸರ್ಕಾರಿ ಶಾಲೆಗಳಿಗೆ ಟ್ಯಾಬ್ಲೆಟ್‌ಗಳು, ವಿದ್ಯಾರ್ಥಿಗಳ ಡೆಸ್ಕ್‌ಗಳು, ಫ್ಲಿಪ್‌ಬೋರ್ಡ್‌ಗಳು, ಶಾಲಾ ಕಿಟ್‌ಗಳು ಹಾಗೂ ಆರ್‌ಒ (RO) ನೀರಿನ ಶುದ್ಧೀಕರಣ ವ್ಯವಸ್ಥೆಗಳನ್ನು ದೇಣಿಗೆಯಾಗಿ ನೀಡಿದೆ.
ಇದರ ಜೊತೆಗೆ, ಎಸ್‌ಆರ್‌ಐ-ಬಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿದ್ದು, ಸರ್ಕಾರಿ ಶಾಲೆಗಳ ಮರುಬಣ್ಣ ಬಳಿಯುವುದು, ಕೆಂಬೋಡಿಯಲ್ಲಿರುವ ಸರ್ಕಾರಿ ಶಾಲೆಯೊಂದನ್ನು ಮರುನಿರ್ಮಿಸುವುದು ಹಾಗೂ ಇತ್ತೀಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕರಣ ಕಾರ್ಯವನ್ನು ಕೈಗೊಂಡಿದೆ.
ನೋಟ್‌ಬುಕ್ ದೇಣಿಗೆ ಅಭಿಯಾನವು ಶಿಕ್ಷಣದ ಮೂಲಕ ಅರ್ಥಪೂರ್ಣ ಸಾಮಾಜಿಕ ಪರಿಣಾಮವನ್ನು ಉಂಟುಮಾಡುವ ಎಸ್‌ಆರ್‌ಐ-ಬಿಯ ವಿಶಾಲ ಬದ್ಧತೆಯ ಒಂದು ಭಾಗವಾಗಿದೆ. ಅಗತ್ಯವಾದ ಕಲಿಕಾ ಸಂಪನ್ಮೂಲಗಳಿಗೆ ಪ್ರವೇಶವನ್ನು ಒದಗಿಸುವುದರ ಜೊತೆಗೆ ಶಾಲೆಗಳ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ, ಎಸ್‌ಆರ್‌ಐ-ಬಿ ಕರ್ನಾಟಕದಾದ್ಯಂತ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅಡಿಪಾಯವನ್ನು ನಿರ್ಮಿಸಲು ಹಾಗೂ ಉಜ್ವಲ ಭವಿಷ್ಯವನ್ನು ರೂಪಿಸಲು ತನ್ನ ಕೊಡುಗೆಯನ್ನು ನಿರಂತರವಾಗಿ ನೀಡುತ್ತಿದೆ.
